ಅನುಪಮಾ ಗೌಡ ನಿರೂಪಣೆಗೆ ದೀಢಿರ್ ನಿವೃತ್ತಿ ದೀಢಿರ್ ನಿವೃತ್ತಿಗೆ ಕಾರಣವೇನು?

ಬೆಂಗಳೂರು : ಕಲರ್ಸ್ ಕನ್ನಡದಲ್ಲಿ ಹಲವು ಶೋಗಳನ್ನು ನಡೆಸಿಕೊಟ್ಟು ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದ ನಿರೂಪಕಿ ಅನುಪಮಾ ಗೌಡ ನಿರೂಪಣೆಗೆ ದೀಢಿರ್ ನಿವೃತ್ತಿ ಘೋಷಿಸಿದ್ದಾರೆ. ಇದರಿಂದ ಅಭಿಮಾನಿಗಳಿಗೆ ಬೇಸರ ಆಗಿದೆ.
ನಟಿ ಅನುಪಮಾ ಗೌಡ ಅವರು ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಗಮನ ಸೆಳೆದವರು. ಸೋಶಿಯಲ್ ಮೀಡಿಯಾದಲ್ಲಿ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇದರ ಜೊತೆಗೆ ಆ್ಯಂಕರಿಂಗ್ ಕೂಡ ಮಾಡುತ್ತಿದ್ದರು. ಇದೀಗ 8 ವರ್ಷಗಳ ಕಾಲ ನೀವೆಲ್ಲ ನನ್ನನ್ನು ಬೆಂಬಲಿಸಿದ್ದೀರಿ, ಬೆನ್ನುತಟ್ಟಿದ್ದೀರಿ. ಈಗ ನನ್ನ ಆ್ಯಂಕರಿಂಗ್ ಜರ್ನಿ ಮುಕ್ತಾಯವಾಗಿದೆ ಎಂದಿದ್ದಾರೆ.
ವೀಡಿಯೋದಲ್ಲಿ ಅವರು ತಮ್ಮ ಆ್ಯಂಕರಿಂಗ್ ಜರ್ನಿ ನೆನೆದಿದ್ದಾರೆ. ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ‘ನನ್ನ ಪ್ರೀತಿಯ ಮನಸುಗಳಿಗೆ ಅನುಪಮಾ ಮಾಡುವ ಪ್ರೀತಿಯ ನಮಸ್ಕಾರ. ಪ್ರತಿ ಕಾರ್ಯಕ್ರಮದಲ್ಲಿ, ಶನಿವಾರ ಮತ್ತು ಭಾನುವಾರ ನಾನು ನಿಮ್ಮನ್ನು ಹೀಗೆ ಸ್ವಾಗತಿಸುತ್ತಿದೆ. ಆದರೆ ಈಗ ನನ್ನ ಧ್ವನಿ ಹೃದಯದಿಂದ ಬರುತ್ತಿಲ್ಲ. ಏಕೆಂದರೆ ಈ ಮೈಕ್ ಅನ್ನು ಕೆಳಗಿಳಿಸುವ ಸಮಯ ಬಂದಿದೆ. ಇಷ್ಟು ವರ್ಷ ನನ್ನ ತಪ್ಪನ್ನು ತಿದ್ದಿದ ನಿಮಗಾಗಿ ಈ ವೀಡಿಯೋ ಮಾಡಿ 8 ವರ್ಷಗಳ ನಿರೂಪಣೆಯ ಪಯಣವನ್ನು ಮುಗಿಸುವ ಸಮಯ ಬಂದಿದೆ’ ಎಂದು ಭಾವುಕರಾಗಿದ್ದಾರೆ.

2018ರ ಜೂನ್ 22ರಂದು ಸೀರಿಯಲ್ ಸಂತೆಗೆ ಮೊದಲ ನಿರೂಪಣೆ ಮಾಡಿದ್ದೆ. 2026ರ ಮೇ 5ರಂದು ಕೊನೆಯ ಬಾರಿ ನಿರೂಪಣೆ ಮುಗಿಸಿ ವೇದಿಕೆಯಿಂದ ಇಳಿದಿದ್ದೆ. ಶುರುಮಾಡಿದ್ದ ಕಾರ್ಯಕ್ರಮವನ್ನೂ ಪೂರ್ತಿ ಮಾಡಿಲ್ಲ. ಪರಮ್ (ಪರಮೇಶ್ವರ್ ಗುಂಡ್ಕಲ್) ಅವರಿಂದ ನಾನು ನಿರೂಪಣೆ ಮಾಡಲು ಸಾಧ್ಯವಾಯಿತು. ಅವರಿಗೆ ಧನ್ಯವಾದ ಹೇಳುತ್ತೇನೆ. ಆರ್ಥಿಕವಾಗಿ ಸಬಲವಾಗಿರುವುದಕ್ಕೂ ನಿರೂಪಣೆಯೇ ಕಾರಣ ಎಂದಿದ್ದಾರೆ.
ಬೇರೆ ಯಾರೋ ಏನೋ ಕಥೆ ಹೇಳುವುದಕ್ಕಿಂದ ನಿರೂಪಣೆ ಬಿಡುವ ವಿಚಾರವನ್ನು ನಾನೇ ಹೇಳುತ್ತಿದ್ದೇನೆ. ನಾನು ನನ್ನೊಳಗಿನ ಕಲಾವಿದೆಗೆ ತೃಪ್ತಿಪಡಿಸಬೇಕು ಎನ್ನುವುದಕ್ಕೆ ಈ ನಿರ್ಧಾರ ಕಾರಣ. ನಿಮ್ಮಿಂದ ತುಂಬಾ ಕಲಿತ್ತಿದ್ದೇನೆ. ತುಂಬಾ ಪ್ರೀತಿ ಕೊಟ್ಟಿದೀರಿ. ಎಲ್ಲರಿಗೂ ಥ್ಯಾಂಕ್ಯೂ.. ಎಲ್ಲವೂ ಒಳ್ಳೆಯದಕ್ಕಾಗಿಯೇ ಆಗುತ್ತೆ. ಮುಂದೆ ಬೇರೆ ಬೇರೆ ದಾರಿಗಳಿವೆ. ಮುಂದೆ ಜೀವನ ಇನ್ನೂ ಚೆನ್ನಾಗಿದೆ. ಈ ವಿದಾಯಕ್ಕೆ ಇದು ಸರಿಯಾದ ಸಮಯ. ನಿಮ್ಮ ಪ್ರೀತಿಗೆ ನಾನು ಚಿರಋಣಿ. ಮುಂದಿನ ದಿನಗಳಲ್ಲಿ ಸಿಗೋಣ ಎಂದು ಭಾವುಕರಾಗಿ ಹೇಳಿದ್ದಾರೆ.
ಮಜಾ ಭಾರತ್, ಕನ್ನಡ ಕೋಗಿಲೆ, ರಾಜಾ ರಾಣಿ, ನಮ್ಮಮ್ಮ ಸೂಪರ್ ಸ್ಟಾರ್, ಸುವರ್ಣ ಸೂಪರ್ ಸ್ಟಾರ್ಸ್, ಸುವರ್ಣ ಜ್ಯಾಕ್ಪಾಟ್, ಗರ್ಲ್ಸ್ vs ಬಾಯ್ಸ್, ಕ್ವಾಟ್ಲೆ ಕಿಚನ್ ಶೋಗಳನ್ನು ಅವರು ಹೋಸ್ಟ್ ಮಾಡಿದ್ದಾರೆ. ಆದರೆ ಕೊನೆಯ ಶೋವನ್ನು ಅವರಿಗೆ ಪೂರ್ಣವಾಗಿ ಮುಗಿಸುವ ಅವಕಾಶ ಸಿಕ್ಕಿಲ್ಲ ಎಂಬ ಬೇಸರ ಅವರನ್ನ ಕಾಡುತ್ತಿದೆ.
2003ರಲ್ಲಿ ರಿಲೀಸ್ ಆದ ‘ಲಂಕೇಶ್ ಪತ್ರಿಕೆ’ ಸಿನಿಮಾದಲ್ಲಿ ಬಾಲನಟಿಯಾಗಿ ಅನುಪಮಾ ಗಮನ ಸೆಳೆದರು. ಆ ಬಳಿಕ 2014ರಲ್ಲಿ ರಿಲೀಸ್ ಆದ ‘ಅಕ್ಕ’ ಧಾರವಾಹಿ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು. ಈ ಧಾರವಾಹಿಯಲ್ಲಿ ಅವರು ದ್ವಿಪಾತ್ರದಲ್ಲಿ ಮಿಂಚಿದ್ದರು. ಇದು ಅವರಿಗೆ ದೊಡ್ಡ ಸವಾಲಾಗಿತ್ತು. 2017-18ರಲ್ಲಿ ಬಿಗ್ ಬಾಸ್ನಲ್ಲಿ ಸ್ಪರ್ಧೆ ಮಾಡಿದ್ದರು. ಅವರು ಕೆಲವು ಸಿನಿಮಾ ಕೂಡ ಮಾಡಿದ್ದು ರಾಜ್ಯ ಪ್ರಶಸ್ತಿ ಗೆದ್ದಿದ್ದಾರೆ.
