November 5, 2026
Breaking News

ಮುಡಾದ ಹೊಸ ವಲಯ ಕಟ್ಟಡ ನಿಯಮಾವಳಿ ಮರುಪರಿಶೀಲನೆಗೆ ಕೃಷ್ಣ ಜೆ. ಪಾಲೆಮಾರ್ ಆಗ್ರಹ

ಮುಡಾದ ಹೊಸ ವಲಯ ಕಟ್ಟಡ ನಿಯಮಾವಳಿ ಮರುಪರಿಶೀಲನೆಗೆ ಕೃಷ್ಣ ಜೆ. ಪಾಲೆಮಾರ್ ಆಗ್ರಹ

ಅವೈಜ್ಞಾನಿಕ ನಿಯಮಗಳಿಂದ ಮನೆ ನಿರ್ಮಾಣಕ್ಕೆ ತೊಂದರೆ; ಸೆಟ್‌ಬ್ಯಾಕ್, ರಸ್ತೆ ಅಗಲೀಕರಣ ಮತ್ತು ಕಟ್ಟಡ ಪರವಾನಗಿ ವಿಳಂಬದ ಬಗ್ಗೆ ಅಸಮಾಧಾನ

ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ರೂಪಿಸಿರುವ ಸಮಗ್ರ ಅಭಿವೃದ್ಧಿ ಯೋಜನೆ (CDP) ಹಾಗೂ ಹೊಸ ವಲಯ ಕಟ್ಟಡ ನಿಯಮಾವಳಿಗಳನ್ನು ತಕ್ಷಣ ಮರುಪರಿಶೀಲಿಸಿ, ಅಗತ್ಯ ತಿದ್ದುಪಡಿ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಆಗ್ರಹಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾದ ಹೊಸ ನಿಯಮಾವಳಿಗಳಿಂದ ಸಾಮಾನ್ಯ ಜನರು ಮನೆ ನಿರ್ಮಾಣ ಮಾಡಲು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು.

ULMS ಆನ್‌ಲೈನ್ ವ್ಯವಸ್ಥೆಯ ತಾಂತ್ರಿಕ ದೋಷಗಳಿಂದ ಕಟ್ಟಡ ಪರವಾನಗಿ ಪಡೆಯುವ ಪ್ರಕ್ರಿಯೆ ವಿಳಂಬವಾಗುತ್ತಿದೆ. ಸಣ್ಣ ಮನೆ ನಿರ್ಮಾಣಕ್ಕೂ ತಿಂಗಳುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ದೊಡ್ಡ ಕಟ್ಟಡಗಳಿಗೆ ಆಫ್‌ಲೈನ್ ಮೂಲಕ ತ್ವರಿತ ಅನುಮತಿ ನೀಡಲಾಗುತ್ತಿದೆ ಎಂಬುದು ತಾರತಮ್ಯಕ್ಕೆ ಕಾರಣವಾಗಿದೆ ಎಂದು ದೂರಿದರು.

ಹೊಸ ವಲಯ ನಿಯಮಾವಳಿಗಳಲ್ಲಿನ ಟೆಲಿಸ್ಕೋಪಿಕ್ ಸೆಟ್‌ಬ್ಯಾಕ್ ವ್ಯವಸ್ಥೆಯ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ ಅವರು, ಏಳು ಅಂತಸ್ತಿನ ಕಟ್ಟಡಕ್ಕೆ ಒಂದು ಮೀಟರ್ ಹಾಗೂ ಎರಡು ಅಂತಸ್ತಿನ ಮನೆಗೆ 1.5 ಮೀಟರ್ ಸೆಟ್‌ಬ್ಯಾಕ್ ನಿಗದಿಪಡಿಸಿರುವುದು ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಸೂಕ್ತವಲ್ಲ. ಇಂತಹ ನಿಯಮಗಳಿಂದ ಅಗ್ನಿಶಾಮಕ ವಾಹನಗಳ ಸಂಚಾರಕ್ಕೂ ತೊಂದರೆಯಾಗುವ ಸಾಧ್ಯತೆಯಿದೆ ಎಂದರು.

ಹಿಂದೆ 6 ಮತ್ತು 7.5 ಮೀಟರ್ ರಸ್ತೆಗಳಿಗೆ ಜಾಗ ಬಿಟ್ಟುಕೊಟ್ಟವರಿಗೆ ನೀಡಲಾಗುತ್ತಿದ್ದ TDR ಹಾಗೂ ಪ್ರೀಮಿಯಂ FAR ಸೌಲಭ್ಯಗಳನ್ನು ಮರುಸ್ಥಾಪಿಸಬೇಕು. ಹೋಟೆಲ್, ವಸತಿಗೃಹ, ಶಾಲೆ ಸೇರಿದಂತೆ ವಿವಿಧ ಕಟ್ಟಡಗಳ ನಿರ್ಮಾಣಕ್ಕೆ 12 ಮೀಟರ್ ರಸ್ತೆ ಕಡ್ಡಾಯಗೊಳಿಸಿರುವ ನಿಯಮ ಮಂಗಳೂರಿನ ಭೌಗೋಳಿಕ ಪರಿಸ್ಥಿತಿಗೆ ಹೊಂದಿಕೆಯಾಗುವುದಿಲ್ಲ. ಇದರಿಂದ ಧಾರ್ಮಿಕ ಕೇಂದ್ರಗಳು ಹಾಗೂ ಶಾಲೆಗಳ ಅಭಿವೃದ್ಧಿಗೂ ಅಡ್ಡಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಲೇಔಟ್ ಅನುಮೋದನೆಗಾಗಿ ವಿವಿಧ ಇಲಾಖೆಗಳ ನಿರಾಕ್ಷೇಪಣಾ ಪ್ರಮಾಣಪತ್ರ (NOC) ಪಡೆಯಲು ಎರಡು-ಮೂರು ವರ್ಷಗಳವರೆಗೆ ವಿಳಂಬವಾಗುತ್ತಿದೆ. ಈ ಪ್ರಕ್ರಿಯೆಯನ್ನು ಮುಡಾ ಮೂಲಕವೇ ಸರಳಗೊಳಿಸುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಮಂಗಳಾ ಕಾರ್ನಿಷ್ ರಸ್ತೆ ಸೇರಿದಂತೆ ಸಮಗ್ರ ಅಭಿವೃದ್ಧಿ ಯೋಜನೆಯಲ್ಲಿರುವ ರಸ್ತೆ ಜೋಡಣೆ ಹಾಗೂ ಅಗಲೀಕರಣದ ಪ್ರಸ್ತಾವನೆಗಳಿಂದ ಜನವಸತಿ ಪ್ರದೇಶಗಳ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ರಸ್ತೆ ಯೋಜನೆಗಳಲ್ಲಿನ ಬದಲಾವಣೆಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಸುಮಾರು 20 ವರ್ಷಗಳಿಂದ ಸಮಗ್ರ ಅಭಿವೃದ್ಧಿ ಯೋಜನೆಯ ಪರಿಷ್ಕರಣೆ ನಡೆದಿಲ್ಲ. ನಗರಾಭಿವೃದ್ಧಿಯ ಹೆಸರಿನಲ್ಲಿ ಜನರ ಮನೆ ನಿರ್ಮಾಣದ ಹಕ್ಕು, ಸಾರ್ವಜನಿಕ ಸುರಕ್ಷತೆ ಮತ್ತು ಹಿತಾಸಕ್ತಿಗೆ ಧಕ್ಕೆಯಾಗಬಾರದು. ಆದ್ದರಿಂದ ಮುಡಾದ ಹೊಸ ವಲಯ ಕಟ್ಟಡ ನಿಯಮಾವಳಿಗಳನ್ನು ಮರುಪರಿಶೀಲಿಸಿ, ಜನಸಾಮಾನ್ಯರಿಗೆ ಅನುಕೂಲವಾಗುವ ನ್ಯಾಯಯುತ ತಿದ್ದುಪಡಿಗಳನ್ನು ಜಾರಿಗೆ ತರಬೇಕು ಎಂದು ಕೃಷ್ಣ ಜೆ. ಪಾಲೆಮಾರ್ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಇಂಜಿನಿಯರ್ ಸಂಘದ ಅಧ್ಯಕ್ಷ ಇಂಜಿನಿಯರ್ ಐ. ಯೋಗೀಶ್ ಪೈ ಉಪಸ್ಥಿತರಿದ್ದರು.

Related posts

36ನೇ ವರ್ಷದ ಸಜೀಪ ಮೊಸರು ಕುಡಿಕೆ ಉತ್ಸವ ನಾಳೆ; ಕೃಷ್ಣ ವೇಷ ಸ್ಪರ್ಧೆ

metromedia

36ನೇ ವರ್ಷದ ಸಜೀಪ ಮೊಸರು ಕುಡಿಕೆ ಉತ್ಸವ: ನಾಳೆ ನೇತಾಜಿ ಯುವಕ ಸಂಘದ ವಠಾರದಲ್ಲಿ 7 ಸ್ಟಾರ್ “ಮೆಲೋಡಿಯಾಸ್” ಕಾರ್ಯಕ್ರಮ

metromedia

“ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ: ತುಳುವಿಗೆ ಹೆಚ್ಚುವರಿ ಆಡಳಿತ ಭಾಷೆ, ₹32,611 ಕೋಟಿ ಯೋಜನೆಗಳಿಗೆ ಅಸ್ತು!”

metromedia

Leave a Comment