77 ಅಶಕ್ತ ಕುಟುಂಬಗಳಿಗೆ ಅಕ್ಕಿ ವಿತರಣೆ; ₹9.50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ‘ತುಡರ್’ ಮನೆ ಕುಟುಂಬಕ್ಕೆ ಹಸ್ತಾಂತರ
ಸಜೀಪ ನಡು: ಸಹೃದಯಿ ಸಮಾನಮನಸ್ಕರ ಒಗ್ಗಟ್ಟಿನ ಪ್ರಯತ್ನದಿಂದ ಆರಂಭಗೊಂಡ ‘ಅಶಕ್ತ ಕುಟುಂಬಕ್ಕೆ ಮಾಸಿಕ ಅನ್ನಪೂರ್ಣ ಯೋಜನೆ’ ಇಂದು ಹಲವಾರು ಕುಟುಂಬಗಳ ಪಾಲಿಗೆ ಆಸರೆಯಾಗಿ ಬೆಳೆದಿದೆ. ಸೇವಾ ಮನೋಭಾವ, ಮಾನವೀಯತೆ ಮತ್ತು ಸಂಘಟಿತ ಪ್ರಯತ್ನಕ್ಕೆ ಮಾದರಿಯಾಗಿರುವ ಈ ತಂಡವು ಸಜೀಪ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಅನಾರೋಗ್ಯ ಪೀಡಿತ ಮತ್ತು ಆರ್ಥಿಕವಾಗಿ ಅಶಕ್ತ ಕುಟುಂಬಗಳಿಗೆ ನೆರವಿನ ಹಸ್ತ ಚಾಚುತ್ತಿದೆ.
2025ರ ಅಕ್ಟೋಬರ್ ತಿಂಗಳಲ್ಲಿ ಸುಮಾರು 100 ಸಹೃದಯಿ ಬಂಧುಗಳನ್ನು ಒಳಗೊಂಡ ವಾಟ್ಸಪ್ ಗ್ರೂಪ್ ಮೂಲಕ ಈ ಯೋಜನೆಗೆ ಚಾಲನೆ ನೀಡಲಾಯಿತು. ಪ್ರಾರಂಭದ ಮೊದಲ ತಿಂಗಳಲ್ಲೇ ಏಳು ಮನೆಗಳಿಗೆ ತಲಾ 30 ಕೆ.ಜಿ. ಅಕ್ಕಿಯನ್ನು ವಿತರಿಸುವ ಮೂಲಕ ಸೇವಾ ಕಾರ್ಯ ಆರಂಭಿಸಲಾಯಿತು. ಇದೀಗ ಸುಮಾರು ಒಂದು ವರ್ಷದ ಅವಧಿಯಲ್ಲಿ ಒಟ್ಟು 77 ಕುಟುಂಬಗಳಿಗೆ ತಲಾ 30 ಕೆ.ಜಿ.ಯಂತೆ ಅಕ್ಕಿ ವಿತರಿಸಿದ ಸಂತೃಪ್ತಿ ತಂಡದ್ದಾಗಿದೆ. ಆರಂಭದಲ್ಲಿ ಸುಮಾರು 100 ಸದಸ್ಯರನ್ನು ಹೊಂದಿದ್ದ ಈ ವಾಟ್ಸಪ್ ಗ್ರೂಪ್ ಇಂದು 160ಕ್ಕೂ ಅಧಿಕ ಸಹೃದಯಿ ಬಂಧುಗಳನ್ನು ಒಳಗೊಂಡಿದ್ದು, ಅವರ ನಿರಂತರ ಸಹಕಾರ ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿದೆ.
ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ‘ತುಡರ್’ ಬೆಳಕು
ತಂಡದ ಸೇವಾ ಕಾರ್ಯ ಕೇವಲ ಮಾಸಿಕ ಅಕ್ಕಿ ವಿತರಣೆಗೆ ಸೀಮಿತವಾಗದೆ, ಸಂಕಷ್ಟದಲ್ಲಿರುವ ಕುಟುಂಬಕ್ಕೆ ಶಾಶ್ವತ ಸೂರು ನಿರ್ಮಿಸಿಕೊಡುವ ಮಹತ್ಕಾರ್ಯಕ್ಕೂ ಸಾಕ್ಷಿಯಾಗಿದೆ.

ಕಳೆದ ವರ್ಷದ ಮಳೆಗಾಲದಲ್ಲಿ ಸಜೀಪ ಹೊಯ್ಗೆ ಮಜಲು ನಿವಾಸಿ ಲಿಂಗಪ್ಪ ಮೂಲ್ಯ ಅವರ ಮನೆಯ ಪಕ್ಕದಲ್ಲಿದ್ದ ಹಲಸಿನ ಮರವೊಂದು ಬಿದ್ದು ಮನೆ ಭಾಗಶಃ ಹಾನಿಗೊಳಗಾಗಿತ್ತು. ಇದರಿಂದ ಕುಟುಂಬಕ್ಕೆ ಮನೆಯಲ್ಲಿ ವಾಸಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಕುಟುಂಬದ ಇಬ್ಬರು ಸದಸ್ಯರು ವಿಶೇಷ ಚೇತನರಾಗಿದ್ದು, ಆರ್ಥಿಕ ಸಂಕಷ್ಟದ ಕಾರಣದಿಂದ ಮನೆಯ ದುರಸ್ತಿ ಕಾರ್ಯ ನಡೆಸುವುದು ಅಸಾಧ್ಯವಾಗಿತ್ತು.
ಈ ವಿಚಾರ ತಿಳಿದ ಮಾಸಿಕ ಅನ್ನಪೂರ್ಣ ವಾಟ್ಸಪ್ ಗ್ರೂಪ್ ಸದಸ್ಯರು ಒಗ್ಗೂಡಿ ಕುಟುಂಬಕ್ಕೆ ನೆರವಾಗಲು ಮುಂದಾದರು. ಆರಂಭದಲ್ಲಿ ಸಮೀಪದ ನೇತಾಜಿ ಯುವಕ ಸಂಘದಲ್ಲಿ ತಾತ್ಕಾಲಿಕ ವಾಸ್ತವ್ಯದ ವ್ಯವಸ್ಥೆ ಕಲ್ಪಿಸಲಾಯಿತು. ಬಳಿಕ ಕುಟುಂಬಕ್ಕೆ ಸುಸಜ್ಜಿತವಾದ ಮನೆ ನಿರ್ಮಿಸಿಕೊಡುವ ಸಂಕಲ್ಪದೊಂದಿಗೆ ಕಾರ್ಯಯೋಜನೆ ರೂಪಿಸಲಾಯಿತು.

ಹಾನಿಗೊಳಗಾದ ಮನೆಯ ಜಾಗವನ್ನು ಸಮತಟ್ಟು ಮಾಡಿ, 2026ರ ಫೆಬ್ರವರಿ 8ರಂದು ಗಣ್ಯ ಅತಿಥಿಗಳು ಹಾಗೂ ಸಹೃದಯಿ ದಾನಿಗಳ ಉಪಸ್ಥಿತಿಯಲ್ಲಿ ಭೂಮಿಪೂಜೆ ನೆರವೇರಿಸಲಾಯಿತು. ಮುಂದಿನ ದೀಪಾವಳಿಯೊಳಗೆ ಈ ಕುಟುಂಬಕ್ಕೆ ಹೊಸ ಸೂರು ನಿರ್ಮಿಸಿಕೊಟ್ಟು, ‘ತುಡರ್’ ಎಂಬ ಹೆಸರಿನೊಂದಿಗೆ ದೀಪಾವಳಿಯಂದು ಈ ಮನೆಯಲ್ಲಿಯೂ ದೀಪ ಬೆಳಗಿಸಬೇಕು ಎಂಬ ಸಂಕಲ್ಪವನ್ನು ತಂಡ ಕೈಗೊಂಡಿತು.
ಈ ಮಹತ್ಕಾರ್ಯಕ್ಕೆ ಊರ ಹಾಗೂ ಪರವೂರ ದಾನಿಗಳು ಕೈಜೋಡಿಸಿದರು. ಎಲ್ಲರ ಸಹಕಾರದಿಂದ ಸುಮಾರು ₹9.50 ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾದ ‘ತುಡರ್’ ಮನೆ ನಿರ್ಮಾಣ ಕಾರ್ಯ ಪೂರ್ಣಗೊಂಡಿತು. ನವೆಂಬರ್ 1ರಂದು ಲಿಂಗಪ್ಪ ಮೂಲ್ಯ ಹಾಗೂ ಅವರ ಕುಟುಂಬಕ್ಕೆ ನೂತನ ಮನೆಯನ್ನು ಹಸ್ತಾಂತರಿಸುವ ಮೂಲಕ ತಂಡ ತನ್ನ ಸಂಕಲ್ಪವನ್ನು ಸಾಕಾರಗೊಳಿಸಿತು.
ಗಣ್ಯರ ಉಪಸ್ಥಿತಿಯಲ್ಲಿ ಗೃಹಪ್ರವೇಶ
ನೂತನ ‘ತುಡರ್’ ಮನೆಯ ಗೃಹಪ್ರವೇಶದ ವೈದಿಕ ವಿಧಿವಿಧಾನಗಳನ್ನು ವೇದಮೂರ್ತಿ ಮಿತೋಟ ಪ್ರದೀಪ್ ಭಟ್ ನೆರವೇರಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷರಾದ ಜಗದೀಶ್ ಆಳ್ವ ಕುವೆತ್ತಬೈಲು, ಸ್ಕ್ಯಾಡ್ಸ್ ಮಂಗಳೂರು ಅಧ್ಯಕ್ಷರಾದ ರವೀಂದ್ರ ಕಂಬಳಿ, ಬಿಜೆಪಿ ಬಂಟ್ವಾಳ ಮಂಡಲದ ಉಪಾಧ್ಯಕ್ಷರಾದ ಶ್ರೀಕಾಂತ್ ಶೆಟ್ಟಿ ಸಂಕೇಶ, ನಾಲ್ಕೈತಾಯ ದೈವಸ್ಥಾನ ಸಜೀಪದ ಅರ್ಚಕರಾದ ಶಂಕರ ಯಾನೆ ಕೋಚ ಪೂಜಾರಿ, ಅನ್ನಪ್ಪಾಡಿ ಶ್ರೀ ಬಾಲಗಣಪತಿ ದೇವಸ್ಥಾನದ ಅಧ್ಯಕ್ಷರಾದ ಯಶವಂತ ಪೂಜಾರಿ ದೇರಾಜೆಗುತ್ತು, ಉದ್ಯಮಿ ರವಳ್ ನಾಥ್ ಮೆಲ್ಕಾರ್, ಒಡಿಯೂರು ಗ್ರಾಮ ವಿಕಾಸ ಯೋಜನೆ ಬಂಟ್ವಾಳ ತಾಲೂಕು ಮೇಲ್ವಿಚಾರಕರಾದ ಜಯಲಕ್ಷ್ಮಿ ಪ್ರಭು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕರಾದ ಕವಿತಾ ವಸಂತ್, ಒಡಿಯೂರು ಗ್ರಾಮ ವಿಕಾಸ ಯೋಜನೆ ಕಲ್ಲಡ್ಕ ವಲಯದ ಸಂಯೋಜಕರಾದ ಸರಸ್ವತಿ ಶೆಟ್ಟಿ, ಮರ್ತಜ ಮಲರಾಯ ದೈವಸ್ಥಾನದ ಗಡಿಪ್ರಧಾನ ರಾಧಾ ಶ್ರೀ ಸುಕುಮಾರ್ ಬಂಟ್ವಾಳ್, ಸೆಲ್ಕೋ ಸೋಲಾರ್ನ ಮಾಲಕರಾದ ರವೀನಾ ಬಂಗೇರ ಹಾಗೂ ಕ್ರೈಸ್ತ ಸಮುದಾಯದ ಪ್ರತಿನಿಧಿ ಮ್ಯಾಕ್ಸಿಂ ಡಿಸೋಜ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಶ್ರೀ ಸುರೇಶ್ ಬಂಗೇರ ಆರ್ಯಾಪು ಅವರು ಅತಿಥಿಗಳನ್ನು ಸ್ವಾಗತಿಸಿದರು. ಶ್ರೀ ದೀಪಕ್ ಕೊಂಕಣ್ತೋಟ ಅವರು ಅಶಕ್ತ ಕುಟುಂಬ ಯೋಜನೆಯ ವರದಿ ಮಂಡಿಸಿದರು. ಶ್ರೀ ಲಕ್ಷ್ಮಣ್ ಮಾಸ್ಟರ್ ವಂದಿಸಿದರು. ಶ್ರೀ ಪ್ರಶಾಂತ್ ಕಂದೂರು ಕಾರ್ಯಕ್ರಮ ನಿರೂಪಿಸಿದರು.
ಹಸಿದವರಿಗೆ ಅನ್ನ, ಸಂಕಷ್ಟದಲ್ಲಿರುವವರಿಗೆ ಆಸರೆ ಹಾಗೂ ನಿರ್ಗತಿಕರಿಗೆ ನೆಮ್ಮದಿಯ ಸೂರು ಕಲ್ಪಿಸುವ ಮೂಲಕ ‘ಮಾಸಿಕ ಅನ್ನಪೂರ್ಣ’ ತಂಡವು ಸಮಾಜದಲ್ಲಿ ಮಾನವೀಯತೆಯ ಬೆಳಕನ್ನು ಪಸರಿಸುತ್ತಿದೆ. ಒಗ್ಗಟ್ಟಿನ ಸೇವಾ ಮನೋಭಾವದಿಂದ ಅಸಾಧ್ಯವೆನಿಸುವ ಕಾರ್ಯಗಳನ್ನೂ ಸಾಧಿಸಬಹುದು ಎಂಬುದಕ್ಕೆ ‘ತುಡರ್’ ಮನೆ ನಿರ್ಮಾಣ ಕಾರ್ಯವೇ ಸಾಕ್ಷಿಯಾಗಿದೆ.
